Tuesday 19 November 2013

ಬಾರದಿರು ಮತ್ತೊಮ್ಮೆ
ಕಣ್ಣೆದುರು ನನ್ನ
ಜಾರಬಹುದು ಈ ಮನಸು
ಪುಃನ ನೋಡಿದರೆ ನಿನ್ನ

ಪ್ರೀತಿಯ ಶಬ್ದಕ್ಕೆ
ಅದು ಹೆದರಿ ಹೋಗಿದೆ
ನೆನಪುಗಳ ದಾಳಿಗೆ
ಮುಸುಕ್ಹೊದ್ದು ಮಲಗಿದೆ

ಹಿಂದೊಮ್ಮೆ ಜಾರಿತ್ತು
ನಿನ್ನಂದಕೆ ಸೋತಿತ್ತು
ಪ್ರೀತಿಯ ಸಂಚಿನಲಿ
ನಿಷ್ಕಲ್ಮಷ ಹೃದಯ

ಹೃದಯವಿದು ಸೋತಿಹುದು
ಭಾವನೆಗಳು ಸತ್ತಿಹವು
ಬಂದರೆ ನೀ ಮತ್ತೊಮ್ಮೆ
ಚಿಗುರುವುದೆ ಪ್ರೀತಿ..? 

$~ ರಾಜ್ ~$ 

Sunday 17 November 2013

ಸ್ತ್ರೀ ಕುಲಕ್ಕೊಂದು ಸಲಾಮ್...!!!

ಹೆಣ್ಣು ಮಗಳು ಹುಟ್ಟಿದಳೆಂದು
ಹೀಗಳೆಯದಿರಿ ಅವಳನ್ನು ಎಂದು
ಹೆಣ್ಣಲ್ಲವೆ ನಮ್ಮನೆಲ್ಲ ಹೊತ್ತು-ಹೆತ್ತಾಕೆ
ಹೊಸತೊಂದು ಉಸಿರ ಭುವಿಗೆ ತಂದಾಕೆ...

ಜೋತೆಗಾಡಿ ಬೆಳೆದ ಅಕ್ಕ-ತಂಗಿಯೂ ಹೆಣ್ಣು
ವಿದ್ಯೆ ಕಲಿಸಿದಾ ಗುರು ಕೂಡಾ ಹೆಣ್ಣು
ಬಾಳಬಂಡಿಯ ಜೋತೆಗಾರ್ತಿ ಹೆಣ್ಣು
ಸತ್ತಾಗ ಒಡಲೊಳಗೆ ಸ್ಥಳ ಕೊಡುವ ಭೂತಾಯಿ ಹೆಣ್ಣು....

ಹೆಣ್ಣು ಮಗಳನ್ನು ಕೀಳಾಗಿ ಕಾಣದಿರಿ
ಅವಳನ್ನು ಎಂದು ಗೋಳೆಂದು ತಿಳಿಯದಿರಿ
ಸಹನೆಗೆ ಸಮನಾರ್ಥ ಪದವೆಂದರೆ ಹೆಣ್ಣು
ಛಲತೊಟ್ಟರೆ ಅವಳು ಎಲ್ಲೆಲ್ಲೂ ಪ್ರಗತಿಯೆ...

ಪುರುಷರಿಗೆ ಸಮನಾಗಿ ಸಹಭಾಗಿಯಾಗಿ
ಸಾಧನೆಯ ಶಿಖರದಲಿ ಮೊದಲ ಪ್ರತಿಯೊಗಿ
ಹೆಣ್ಣು ಅಬಲೆಯನ್ನೊ ನಾಣ್ಣುಡಿಯ ಅಳಿಸುತ್ತ
ಹೊಸತೊಂದು ಮುನ್ನುಡಿಯ ಬರೆಯಲ್ಹೊರಟಿಹಳು...!!!

{ ಅಜ್ಜಿ-ಅಮ್ಮ-ಅಕ್ಕ-ತಂಗಿ-ಗೆಳತಿ-ಸಕಲ ಸ್ತ್ರೀ ಕುಲಕ್ಕೆ ಅರ್ಪಣೆ} 

$~ ರಾಜ್ ಪಾಟೀಲ್~$
ಅಂದು ಕಾದಿದ್ದಳು ಶಬರಿ
ಶಬರಿಮಲೆಯಲ್ಲಿ ರಾಮನ
ದಶ೯ನಕ್ಕಾಗಿ.....

ಇಂದು ಕಾದಿಹಳು ಶಬರಿ
ಆನ್ ಲೈನ್ ನಲ್ಲಿ ರಾಮನ
ಕಮೆಂಟ್ ಟ್ವೀಟಗಾಗಿ.....

ರಾಜ್....!!
ನೀನಂದು ಬರಿಗಾಲಿನಲ್ಲಿ
ಬಂದಿದ್ದರೆ ಎನ್ನೆದೆಯೊಳಗೆ
ನೋಡಿ ಸಂಭ್ರಮಿಸುತ್ತಿದ್ದೆ
ನಿನ್ನ ಹೆಜ್ಜೆ ಗುರುತುಗಳು......

ಆದರೆ ನೀ ಬಂದಿದ್ದು
ಹೈಹೀಲ್ಡಿನಲಿ
ನನ್ನೆದೆಯಲ್ಲಿಗ
ಬರೀ
ತೆಗ್ಗು ದಿನ್ನೆಗಳು...

ರಾಜ್…!!

Tuesday 12 November 2013

ದೇಹದೊಳಗಿನ ಉಸಿರು
ಎಣ್ಣೆಯಿಲ್ಲದ ದೀಪದಂತೆ
ಯಾವಾಗ ನಿಲ್ಲುವುದೋ
ಹೊತ್ತಿಲ್ಲ-ಗೊತ್ತಿಲ್ಲ...

ಮರಣವೆಂಬ ಮುಕ್ತಿ
ಬರುವುದಂತು ಖಚಿತ
ಅದು ಬರುವ ಮುನ್ನ
ಹೇಳೊಲ್ಲ-ಕೇಳೊಲ್ಲ...

ನಾಳೆ ಎನ್ನುವುದು ಕನಸು
ನನಸಾಗುವ ಭರವಸೆಯಿಲ್ಲ
ಇಂದು ಎನ್ನುವುದಷ್ಟೆ
ನಮ್ಮ ಬಳಿಯಿರುವ ಸತ್ಯ...

ಜನನ-ಮರಣಗಳೆರಡು
ನೀರ ಮೇಲಣ ಗುಳ್ಳೆ
ಹುಟ್ಟು ಆಕಸ್ಮಿಕವಷ್ಷೆ
ಸಾವು ಅನಿವಾರ್ಯವಯ್ಯ...!!!

$~ ರಾಜ್ ಪಾಟೀಲ್~$

Monday 11 November 2013

ಬಾನಲ್ಲಿ ಚಂದಿರನಿಲ್ಲ
ಬಾಳಲ್ಲಿ ಇನಿಯನು ಕೂಡಾ
ಅಮವಾಸೆ ದಿನವಿದು ಅಲ್ಲ
ಆದರೂ ಚಂದಿರನಿಲ್ಲ...

ಇನಿಯನಿಲ್ಲದ ಬಾಳು 
ಹೇಳತಿರದ ಗೋಳು
ಚಂದಿರನಿಲ್ಲದ ಬಾನು
ಮಧುವಿರದ ಜೇನು....

ಚಂದಿರನ ಕಾಯಕವು
ಕಣ್ಣಾ ಮುಚ್ತಾಲೆಯು
ಇನಿಯನಿಗೇಕೊ ಕಾಣೆ
ಕೋಪ ತಾಪವು....

ಬಾನ ಚಂದಿರ ತಾನೆ
ಬರುವನಮ್ಮ
ಬಾಳ ಚಂದಿರ ತಾ
ಹಿಂತಿರುಗಿ ಬರುವನೇ ..?

#~ ರಾಜ್ ಪಾಟೀಲ್~ #

Thursday 7 November 2013

ಬಚ್ಚಿಟ್ಟ ಕನಸುಗಳು
ಬೆಚ್ಚನೆ ಮಲಗಿವೆ
ಮರೆತಂಥ ನೆನಪುಗಳು
ಮೈಕೊಡವಿ ಎದ್ದಿವೆ....

ಮನದ ಅಂಗಳದಿ ಈಗ
ಸಹಿಸದ ಬಿರುಗಾಳಿ
ನೆಮ್ಮದಿಯು ಮರಿಚೀಕೆ
ಸಿಲುಕಿ ನೆನಪಿನ ಸುಳಿ...

ಮೌನ ಮನಸ್ಸಿಗೀಗ
ನೆನಪುಗಳ ದಾಳಿ
ಕಾಲ್ಕೆರೆದು ಕರೆದಿವೆ
ಮರೆತಿದೆ ಪ್ರತಿದಾಳಿ...

ಮನಸಿಗೂ-ನೆನಪಿಗೂ
ಬಿಡಿಸಲಾಗದ ನಂಟೆ
ಸರ್ವರೋಗಕ್ಕು ಮದ್ದು
ನೆನಪು ಮರೆಯಲು ಉಂಟೆ.?

$~ ರಾಜ್ ಪಾಟೀಲ್~$

Wednesday 6 November 2013

" ಹೀಗೊಂದು SOMEಭಾಷಣೆ"


ಗೆಳತಿ :- 
ಹಗಲು ಇರುಳುಗಳೆರಡು
ಸಂಧಿಸುವ ಸಮಯವಿದು
ತಡವೇಕೆ ನೀ ಮಾಡಿದೆ....

ಆಗಸದ ಅಂಗಳದಿ
ತಾರೆಗಳು ಕಣ್ ಬಿಡುವ ಮೊದಲು
ಮುತ್ತೊಂದ ಕೊಡಬಾರದೆ....

ಗೆಳೆಯ:- 
ಹಗಲಿನ ಕೊನೆಯಲ್ಲೆ 
ಹೊರಟಿದ್ದೆ ನಾನು
ಟ್ರಾಫಿಕ್ಕು ಜಾಮು ಕಣೇ....

ಚಂದ್ರ-ಚುಕ್ಕಿಗಳೆಲ್ಲ
ಇಣುಕಿಣುಕಿ ನೋಡುತಿಹವು
ಸೆನ್ಸಾರ್ ಪ್ರಾಬ್ಲಮ್ಮು ಕಣೇ....

ಕೊನೆಯಲ್ಲಿ ಪರಿಹಾರ:- 
ಮಂಗಳನ ಅಂದಳದಿ
ಮನೆಯೊಂದ ಮಾಡುವೆ
ನಿನ್ನಾ ಕೆಂದುಟಿಗೆ
ಮುತ್ತುಗಳ ಮಳೆಗರೆವೆ...) ;-)

$~ ರಾಜ್ ಪಾಟೀಲ್~$ 

Friday 1 November 2013

"ಪ್ರೀತಿಯ ಹಣತೆ"

ನಿನಂದು ಹಚ್ಚಿಟ್ಟು ಹೋದ
ಪ್ರೀತಿಯ ಹಣತೆ
ಈಗಲೂ ಉರಿಯುತಿದೆ
ನನ್ನೆದೆಯ ಗೂಡಲ್ಲಿ...

ನಂಬಿಕೆಯ ತೈಲದಲಿ
ಆರದೆ ಬೆಳಗುತಿದೆ
ಹೃದಯದ ತುಂಬೆಲ್ಲ
ಒಲವಿನ ಬೆಳಕು...

ನಿನಗಾಗಿ ಕಾಯುತಿದೆ
ಹೊಸತೊಂದು ಆಸೆಯಲಿ
ಬಯಸಿದೆ  ಬೆಳಕಾಗಿ
ಕೊನೆವರೆಗೂ ಬದುಕಿನಲಿ....

ಮತ್ತೆ ಬಂದಿದೆ ಬೆಳಕಿನ ಹಬ್ಬ
ಎಲ್ಲೆಲ್ಲೂ ದೀಪಗಳ ಸಾಲು
ನನ್ನೆದೆಯ ಗೂಡಲ್ಲೂ
ನಿನ್ನ ಪ್ರೀತಿಯ ಹಣತೆ...!!!

$~ ರಾಜ್ ಪಾಟೀಲ್ ~$

" ಹೀಗೊಂದು ವಾರ್ನಿಂಗ್ "

ಕೇಳು ಓ ಚಂದಿರನೆ
ನಿನಗ್ಹೇಳಿ ಸಾಕಾಯ್ತು
ಬಾರದಿರು ಇನ್ನೊಮ್ಮೆ
ನನ್ನವಳ ತಂಟೆಗೆ....

ಬಲುತುಂಟಿ ಅವಳು
ಸೆಳೆಯದಿರು ನೀನವಳ
ಒಲಿದಾಳು ನಿನ್ನೆಡೆಗೆ
ಮರೆತಾಳು ನನ್ನನ್ನು....

ಅವಳಿರದ ಜೀವನ
ನೆನೆಯುವುದ ಕಷ್ಟ
ಬಿಡದಿರೆ ಅವಳನ್ನು
ನಿನಗಿದೆ ಸಂಕಷ್ಟ...

ನಿನಗಿದೊ ಕೊನೆಬಾರಿ
ಎಚ್ಚರಿಕೆ ಹೇಳುವೆ
ಕಾಡಿದರೆ ಮಗದೊಮ್ಮೆ
ಸೆರೆವಾಸವ ತೋರುವೆ...!!!

$~ ರಾಜ್ ಪಾಟೀಲ್ ~$