Tuesday 8 September 2015

ನನ್ನ ಒಲವಿಗಿಂದು 
ಕಂಕಣಬಲ ಬಂತು
 ಅವಳ ನೆನಪುಗಳಿಗಿನ್ನು 
ಮರಣಶಕೆ ಆರಂಭ... 

ಉಸಿರಾಟವೇ ಮರತಂತಿದೆ
 ಹೃದಯದೊಳಗೆ ಕಂಪನ 
ಬದುಕುವುದೇ ಮನಸು 
ಅವಳಿಲ್ಲದೆ ನೆನಪಿಲ್ಲದೆ ... 

ಬಾರದ ಮರುಹುಟ್ಟಿಗೆ
 ಬದುಕುವ ಕಲೆಗೊತ್ತು
 ನೀನೊಲಿದು ಬಂದಿದ್ದರೆ 
ಪ್ರೀತಿಗೆ ಬೆಲೆಯಿತ್ತು ... 

ನೀನಿಲ್ಲದೆಯೂ ಬದುಕಿನಲಿ 
ಬದುಕುವೆ ನಾ ನನಗಾಗಿ
 ನೀನೊಪ್ಪದೆ ಹೋದ
 ಪ್ರೀತಿಯ ನೆನಪಾಗಿ ...!!!

Wednesday 29 April 2015


ನಿನ್ನ ನಗುವೊಂದು
ಕನಸ ಕದ್ದಿಹುದು
ಅಲೆಮಾರಿ ಹೃದಯಕ್ಕೆ
ಅಪಫಾತವಾಗಿದೆ ...

ನಿನಗೂ ಕನಸುಂಟೆ
ಕನಸಲಿ ನಾನುಂಟೆ
ಕಾಣದ ಕಡಲಿಗಾಗಿ
ಹಂಬಲಿಸುವ ಹುಂಬತನ ...

ಮನದ ಆಸೆಯು
ಕಣ್ಣಲಿ ಹೇಳಿದೆ
ಮೂಡಿದ ಬಯಕೆಗೆ
ತಡೆಯನು ನೀಡಿದೆ ...

ಅರಿವಿನ ಮೂಟೆಯ
ಪಕ್ಕಕೆ ಇಟ್ಟು
ಮನಸಿಗೆ ರೆಕ್ಕೆ ಪುಕ್ಕವ ಕಟ್ಟಿ
ತಪ್ಪೊಂದ ಮಾಡುವ...

ನಿನ್ನ ನಗುವೊಂದು
ಕನಸ ಕದ್ದಿಹುದು
ಕಳೆದ ಕನಸಿನಲಿ
ನನ್ನ ಮನಸಿಹುದು ..!!
ಸಮಯವೇ ಸಹಕರಿಸು
ಓಡದಿರು ಸರಸರನೇ
ವಿಶ್ರಮಿಸು ಕೆಲಹೊತ್ತು
ಧಾವಂತದ ನಡೆ ಬೇಡ ...

ಬದುಕಿನ ಜಂಜಾಟದಲಿ
ನಗಲು ಪುರುಸೊತ್ತಿಲ್ಲ
ಉಭಯಕುಶಲೋಪರಿಯು
ವ್ಯವಹಾರದ ಸರಕಾಗಿದೆ ...

ಸಂಬಂಧಗಳ ನಡುವಲ್ಲಿ
ಸಮನ್ವಯದ ಕೊರತೆ
ಮನೆ - ಮನಗಳಲ್ಲಿ
ಏಕಾಂತವು ಆವರಿಸಿದೆ ...

ಕನಸಿಗೂ - ಮನಸಿಗು
ಸಮಯವೇ ವೈರಿಯು
ಅರಿತುಕೊಳ್ಳುವ ಮುನ್ನ
ಅಗಲಿಕೆಯ ಶಿಕ್ಷೆಯೆ ...

ಸಮಯವೇ ಸಹಕರಿಸು
ಓಡದಿರು ಸರಸರನೇ
ನನಗೆಂದೆ ತುಸು ಸಮಯ
ಕೊಡಬಾರದೆ ನೀ...!!

Thursday 23 April 2015

ಮನಸು
ಕಾಯುತ್ತಿದೆಯೆಕೋ
ನನಸಾಗದ
ಕನಸಿಗೆ
ಒಂದು
ಬಾರಿ
ಒಲಿಸಿಕೊಳ್ಳುವ
ಛಲ
ಕನಸು
ಜೊತೆ
ನೀಡಿ
ನನಸಾಗುವುದೇ
ಇಲ್ಲ
ನೆನಪಾಗುವುದೇ
ಕಾಡುತ್ತಿರುವ
ಯಕ್ಷಪ್ರಶ್ನೆ...?
ಕನಸೊಂದ ಹೆಣೆದಿರುವೆ
ನಿನಗೆಂದೆ ಹೊಸತೊಂದು
ಏಕಾಂಗಿ ಹೃದಯದಲಿ
ಅರಳಿದೆ ಹೂವೊಂದು ...

ಅನುದಿನವೂ ಕನಸಲ್ಲಿ
ಅಗಲಿಕೆಯ ನೋವುಂಟು
ಚಡಪಡಿಸೊ ಮನದಲ್ಲಿ
ನೆನಪುಗಳು ನೂರೆಂಟು ...

ನಿನ್ನ ಮನದೊಳಗೆ ಕಾಲಿಡಲು
ಅನುಮತಿಯೂ ಬೇಕಾಗಿದೆ
ಮುನಿಸದಿರು - ಮನದಲ್ಲದಿರೆ
ಕನಸೊಳಗೆ ಜಾಗಕೊಡು ...

ಮನದ ಬಯಕೆಯೊಂದೆ
ನನಸಾಗಲಿ ಕನಸು
ಏಕಾಂತದಿ ಸಂಧಿಸಲು
ಹಾತೊರೆದಿದೆ ಮನಸು
ಯಾವ ಮಾಯೆಯಲಿ
ಜೊತೆಯಾದ ಬಂಧವೊ
ಹೊಸತೊಂದು ಕನಸಿನ
ಕನವರಿಕೆಗೆ ಕಾರಣ...

ಮನದ ನಡುವೆ ಇರಲಿ ಹೀಗೆ
ಮರೆಯದಂಥ ಅಂತರ
ಆತ್ಮೀಯತೆ ಹೆಚ್ಚಿದರೆ
ಅಗಲಿಕೆಯ ನೋವು ನಿರಂತರ....

ಮನದ ಒಳಗೊಳಗೆ
ಹೇಳತೀರದ ಬಯಕೆ
ಭಾವತೀರದ ಯಾನ
ಬದುಕಿನ ಉಳಿದ ಪಯಣ...

ಅಲಕ್ಷ್ಯದ ಅಂಕೆಯಲಿ
ಹೆದರುತಿದೆ ನೆನಪು
ಕನವರಿಸುವ ಕನಸಿಗೆ
ಸಂತೈಸು ಬಾ ಕುಸುಮವೇ...!!!

ಜೀವನದ ಇಳಿಸಂಜೆಯಲಿ
ಒಮ್ಮೆಯಾದರು ಸಿಗುವ
ಹರೆಯದ ನೆನಪುಗಳ
ಮೆಲುಕಿಸುವ ಜೊತೆಗೂಡಿ...

ನವಿರಾದ ಪ್ರೀತಿಯಲಿ
ಕನವರಿಕೆಯ ಕನಸುಗಳು
ಒಲವಿನ ಜೊತೆಜೊತೆಗೆ
ಹುಸಿ ಮುನಿಸು ಬೆರೆತು...

ಹಸನಾಗೊ ಬಾಳಿನಲಿ
ಹದವಾಗಿ ತಾ ಬೆಳೆದು
ಮನಸುಗಳ ನಡುವಲ್ಲಿ
ವೈಮನಸ್ಸಿನ ಆಕ್ರಮಣ...

ಬಾಳ ಪಯಣದಲಿ
ಕವಲೊಡೆದವು ದಾರಿಗಳು
ಗುರಿಮುಟ್ಟಿವೆ ಮನಸುಗಳು
ಬೇರೆಯದೆ ರೀತಿಯಲಿ...

ಕಾಲಚಕ್ರವು ತಿರುಗಿ
ಸಂಂಧಿಸಿದರೆ ಒಂದೊಮ್ಮೆ
ಹರೆಯದ ತಪ್ಪುಗಳ
ಒಪ್ಪಿ ಮುನ್ನಡೆಯುವ...

ಮತ್ತದೇ ಕವಲುದಾರಿ
ಏಕಾಂತದೆಡೆಗೆ ಪಯಣ
ಮರೆತಂಧ ಮನಸಿನಲಿ
ಮರೆಯದ ನೆನಪುಗಳ ಹೊತ್ತು..!!

ರಾಜ್..!!

Saturday 28 March 2015

ಮನದ ಅಂಗಳದಲಿ
ಮನಸು ಹಾರಾಡಲಿ
ಬಚ್ಚಿಟ್ಟ ಆಸೆಯೂ
ಗರಿಗೆದರಿ ಕುಣಿಯಲಿ ...

ನಿನ್ನ ಖುಷಿಯಲ್ಲಿಯೇ
ನನ್ನ ಸಂತೋಷವು
ನನ್ನ ಕನಸಲ್ಲಿಯೂ
ನೀನೊಂದು ಸುಂದರ ಹೂ...

ಕನಸ ಮೊಟ್ಟೆಗೆ ಕಾವ ನೀಡುವ
ಒಡೆದು ಬರಲಿ ಮನದ ನೋವ
ಮನದ ಆಸೆಗೆ ಆಸರೆಯಾಗಿ
ಹಂಚಿಕೊಳ್ಳುವ ಸಂಭ್ರಮವ...

ನಿನ್ನ ಕನಸೊಂದಿಗೆ
ನಾ ಜೊತೆಯಾಗಿಯೇ
ಕನಸು ನನಸಾಗಲು
ನಾ ಸಹಕರಿಸುವೆ... !!
ಚೆಂದವಳ್ಳಿ ತೋಟದಲ್ಲಿ
ಅರಳಿನಿಂತ ಗುಲಾಬಿ ಹೂವೆ
ಚಂದದೂರ ಚೆಲುವೆ ನೀನು
ನಿನ್ನಂದಕೆ ಸಾಟಿಯಾರೇ ..

ಮಧುವರಸಿ ದುಂಬಿಯೊಂದು
ಸುಳಿಯುತಿಹುದು ಸುತ್ತಮುತ್ತ
ಒಲವ ಸುಧೆಯ ಹೀರೊ ಬಯಕೆ
ಜಾಣ ಕುರುಡು ಹೂ ಮನಕೆ ...

ಮನಸು ಒಂದು ಮಲ್ಲಿಗೆ ದಂಡು
ನೆನಪು ಸೆಳೆವ ದಾಸವಾಳ
ರೇಷ್ಮೆ ಕೂಡ ನಾಚುತಿಹುದು
ನಿನ್ನ ಕೆನ್ನೆ ನುಣುಪು ಕಂಡು ...

ಚಂದ್ರತಾನು ಚಿಂತಿಸುತಿಹನು
ಭುವಿಯ ಮೇಲೆ ನಿನ್ನ ನೋಡಿ
ಹಾಲಿನಂತಹ ಬೆಳಕ ಮುಂದೆ
ತನ್ನ ಬಿಂಬ ಸಪ್ಪೆ ಎಂದು ...

ನನ್ನ ಸ್ನೇಹ ಸಾಗರದಲ್ಲಿ
ಈಜಿ ಬಂದ ನಕ್ಷತ್ರ ಮೀನೆ
ಸಾಗುತಿರಲಿ ಸಾಗರಯಾನ
ಉಸಿರು ತಾನೇ ಸೋಲೊವರೆಗೆ ...

ಚೆಂದವಳ್ಳಿ ತೋಟದಲ್ಲಿ
ಅರಳಿನಿಂತ ಗುಲಾಬಿ ಹೂವೆ
ನನ್ನದೊಂದು ನೆನಪಿರಲಿ
ನಿನ್ನ ಮಧುರ ಮನಸಿನಲಿ ..!!
ಮನ ಜಾರುತಿದೆ ನಿನ್ನಲಿ
ಇಂದೇಕೊ ಕಾಣೆ ಗೆಳೆಯ
ಕನಸಲ್ಲು-ನೆನಪಲ್ಲೂ
ನಿನ್ನ ಸೇರುವ ಧ್ಯಾನ...

ಮನದ ಮೂಲೆಯಲ್ಲೆಲ್ಲೊ
ಅಳುಕೊಂದು ಕಾಡುತಿದೆ
ಬೆಸೆದ ಈ ಬಂಧನವು
ನೈತಿಕತೆಯೊ-ಅನೈತಿಕವೊ...

ಏಕಾಂತದಿ ಕೂಡಿಕೊಂಡು
ತೋಳನೊಮ್ಮೆ ಬಳಸುವಾಸೆ
ಕಂಡ ಕನಸು ನನಸಾಗಿಸಿ
ಬೇರೆ ಎಲ್ಲ ಮರೆಯುವಾಸೆ...

ಜಾರುತಿದೆ ಮನ ನಿನ್ನಲಿ
ಬೇಗನೆ ಬಂದು ಬಿಡು
ಮನದಾಳದ ಆಸೆಯೊಂದ
ತೀರಿಸು ಬಾ  ಗೆಳೆಯ...!!! 

Tuesday 24 March 2015

ಕಾಡುವ  ಕನಸೊಂದಿಗೆ
ಕೂಡುವ  ಮನಸಾಗಿದೆ
ನನಸಾಗುವುದೇ ಕನಸು
ನಿನ್ನೊಂದಿಗೆ  ಒಲವಾಗಿದೆ ...

ನೀನಾರೊ-ನಾನಾರೋ
ಬೆಸೆದಿದೆ ನಂಟೊಂದು
ಮನಸಿಗು-ಕನಸಿಗು
ಮಾಗಿಯ ಸಂಭ್ರಮವು...

ಮೌನದ ಕ್ಷಣಗಳಲಿ
ಸಹಿಸದ ಚಡಪಡಿಕೆ
ಕಾತರವು -ಆತುರವು
ಮಾತನಾಡುವ ಬಯಕೆ...

ನೀನೊಂದು ಅಂಬರದ ತಾರೆ
ದೂರ-ದೂರವೆ ನನ್ನಿಂದ
ಒಂದು ಬಾರಿ ಒಲಿದುಬಿಡು
ಇನ್ನೆಂದಿಗೂ ಬಯಸೆ ನಾ...

ಕಾಡುವ  ಕನಸೊಂದಿಗೆ
ಕೂಡುವ  ಮನಸಾಗಿದೆ
ನನಸಾಗುವುದೇ ಕನಸು
ನಿನ್ನೊಂದಿಗೆ  ಒಲವಾಗಿದೆ ...!!!

Sunday 22 March 2015


ಬಲು ಪ್ರಯಾಸದಿ
ಜನಿಸಿದೆ ನನ್ನೀ
ಕವಿತೆಯು ಹಳೇ
ನೆನಪುಗಳ ಬೆಂಬತ್ತಿ...

ಒಲುಮೆಯ ಬಳ್ಳಿಯು
ಜೊತೆಯಾಗದೆ ಜರಿದು
ದೂರ ತಳ್ಳಿದೆ ಇಂದು
ಒಬ್ಬಂಟಿ ಕವಿಯೀಗ...

ಪ್ರಸವ ವೇದನೆಯು
ಕವಿಯ ಎದೆತುಂಬ
ಪ್ರೀತಿಯ ಅಪೂಣ೯ತೆಗೆ
ಕವಿತೆಯು ವಿಕಲಾಂಗ...

ಕವಿಯ ಹೃದಯದಲಿ
ಭಾವನೆಗಳು ಮೇಳೈಸಿ
ಹುಟ್ಟಿಕೊಂಡಿದೆ ಕವಿತೆ
ಅವಳದೇ ನೆನಪಲ್ಲಿ..!!

ನೀ ತೊರೆದ ಘಳಿಗೆಯಲಿ
ಮತ್ತೆ ಬಂದಿದೆ ಹೋಳಿ
ಬಣ್ಣ ತುಂಬುವರಾರು
ಕಪ್ಪು-ಬಿಳುಪಿನ ಬದುಕಿನಲಿ...

ಕಾಮನ ಬಿಲ್ಲಿಗೂ ಮೀರಿದ ರಂಗು
ನೀ ಜೊತೆಯಿದ್ದ ಪ್ರತಿಘಳಿಗೆ
ನಿನ್ನಿರುವಿಕೆ ಭಾವ ಮನಕೆ
ಹುಚ್ಚು ಪ್ರೇಮದ ಭ್ರಮೆಯೊಳಗೆ...

ಓಕುಳಿಯಾಟದ ಸಂಭ್ರಮವು
ತುಂಬಿ ತುಳುಕಿದೆ ಎಲ್ಲೆಡೆ
ನಗುತಿವೆ ನೂರಾರು ಮನಗಳು
ಗೆದ್ದ ಕನಸಿನ ಖುಷಿಯೊಳಗೆ...

ವಿರಹ ಸಂಕೋಲೆ ಕಡಿದು
ಹೊರ ಬರಲು ಕಾತುರ
ಮುನಿಸು ಮರೆಸುವುದೇ ಮನಸು
ನೆನಪು ಸೇರುವ ಆತುರ...

ಕೈಬೀಸಿ ಕರೆಯುತಿವೆ ಬಣ್ಣಗಳು
ಒಲವ ಓಕುಳಿಯಾಡಲು
ಬಾ ಒಲವೇ ಜೊತೆಯಾಗು
ಬಣ್ಣದಲಿ ಹೊಸ ಬದುಕು ಕಟ್ಟುವ..!!

$~ರಾಜ್~$

ಹೂ ಮನದ ಒಡತಿ
ಹೂ ಬನಕೆ ಸಂಗಾತಿ
ಮುಗಿಲ ಚಂದಿರನ
ಓ ಮುದ್ದು ಗೆಳತಿ....

ಕನಸೊಂದ ಹೆಣೆದಿರುವೆ
ನಿನಗಾಗಿ ಕಾದಿರುವೆ
ಕಾಡುವ ನೆನಪನ್ನು
ಮನಸಿಂದ ಹೊರಹಾಕು ...

ನೋವಿನ ಆಚೆಗೊಂದು
ಅಂದದ ಬದುಕಿದೆ
ಅಳಿದುಳಿದ ಬದುಕಿಗೆ
ಈ ಸ್ನೇಹದ ಲೋಕವಿದೆ ....

ನನ್ನುಸಿರು ಇರೊವರೆಗೂ
ನಿನ್ನೊಂದಿಗೆ ನೆರಳಾಗಿ
ಸ್ನೇಹದ ದೋಣಿಯಲ್ಲಿ
ನಾನಿರುವೆ ಜೊತೆಯಾಗಿ ....!!
ಉರಿವ ನೇಸರನ ಕಂಡು
ಉಗಿಯುತಿಹ'ನಲ್ಲ'
ನಲ್ಲೆಯ ಚೆಲುವೆಲ್ಲ
ಬಸವಳಿದು ಬಾಡುತಿದೆ...
ಸಂಪಿಗೆಯ ಮೊಗದವಳು
ಚೆಂಗುಲಾಬಿ ಕೆನ್ನೆ
ಸೂರ್ಯಕಾಂತಿಯ ಬಿಂಬ
ಸೊರಗಿಹಳೊ ಭಾಸ್ಕರನೇ...
ಇಂದೇಕೊ ಒಲವಿನಲಿ
ಪಿಸುಮಾತ ನುಡಿದಿಹಳು
ನನ್ನ ಚೆಲುವೆಯು ತಾ
ಬೆಳದಿಂಗಳ ಬಯಸಿಹಳು...
ಕಡಲ ಮರಳಿನಲಿ
ಮನೆಯೊಂದ ಕಟ್ಟುವೆವು
ಅಲೆಗಳ ಜೊತೆಯಲ್ಲಿ
ಜೂಟಾಟವಾಡುತ್ತ...
ನೀಲಿ ಬಾನಿನಲಿ
ಚಂದಿರನ ಕಳಿಸಿಬಿಡು
ಜಗಬೆಳಗೋ ಕಾಯಕವ
ನೀ ಬೇಗ ಮುಗಿಸಿಬಿಡು...!!!

~$ರಾಜ್$~

Wednesday 18 February 2015


ಮನಸಿನ ಕನ್ನಡಿಯಲ್ಲಿ
ಮೌನದ ಬಿಂಬ ಮಾತಾಡಿ
ಮನಕ್ಕು - ಮೌನದ ನಡುವೆ
ಅಂತರವ ಹೆಚ್ಚಿಸಿದೆ....

ಅಂತರಂಗದ ನೋವ
ಅರಿತುಕೊಳ್ಳುವರಾರು
ಅರಿಯದೇ ಮಾಡಿದ ತಪ್ಪಿಗೆ
ಮನ್ನಿಸಿ ಮುದ್ದಿಸುವರಾರು...

ಒಲವ ಸೇತುವೆಯಲ್ಲಿ
ಛಲವುಂಟು ಬಲವುಂಟು
ಮನದ ಅಂಗಳದಲ್ಲಿ
ಸಹಿಸದ ಬಿರುಗಾಳಿಯ ...

ಕಾದು ನಿಂತಿಹ ಮನಕೆ
ಮೌನದಿ ಒಂದು ನಮನ
ಕಾಣದ ಚಿಂತೆಗೆ ಕದಡಿ
ರಾಡಿಯಾಗಿದೆ ನನ್ನೀ ಮನ...

ನೆನಪೊಂದು ನೆಪವಾಗಿ
ಕನಸ ಕೊಲ್ಲುತಿದೆ
ಮನದೊಳಗಿನ ಮಾತು
ಒಳಗೊಳಗೇ ಸಾಯುತಿದೆ ...!!

ಇನ್ನೇಷ್ಟು ದಿನ ಹೀಗೆ
ಮೌನದಾಶ್ರಯದಲ್ಲಿ
ಸೆರೆಯಾಗಿ ನೀ ನಿರುವೆ
ಆಸರೆಯು ಇನ್ನಾರು ನನಗೆ...

ಇಂದೊಳ್ಳೆ ದಿನವುಂಟು
ಪ್ರೀತಿಗೆ ಜಾತ್ರೆಯಿದು
ನೀಡಿಬಿಡು ನನಗೊಂದು
ಪ್ರೀತಿಯ ಉಡುಗೊರೆ...

ಮನದೊಳಗೆ ಕೊರಗುತಲಿ
ಹೃದಯಕ್ಕೆ ಗಾಯವು
ಹಾರಿಬಿಡು ಹೊರಗಿನ್ನು
ಬಚ್ಚಿಟ್ಟ ಪ್ರಿತಿ ಹಕ್ಕಿ...

ಇತಿಹಾಸ ಪುಟದೊಳಗೆ
ಹಲವಾರು ಪ್ರೆಮಕಾವ್ಯ
ಅರಳಿ ನಿಂತಿವೆ ಇಲ್ಲಿ
ಪರಿಶುಧ್ದ ಪ್ರೀತಿಗೆ ಆಧಾರವಾಗಿ..

ತಡಮಾಡದೇ ಹೇಳಿಬಿಡು
ಕಾಡದಿರು ಸುಮ್ಮನೇ
ಇನ್ನೇಷ್ಟು ದಿನ ಹೀಗೆ
ಕಾಯುವ ಶಿಕ್ಷೆಯು...!!

ಅರಿಯದೇ ಹುಟ್ಟುವ ಪ್ರೀತಿ
ಅರಿತ ಮೇಲುಳಿಯುವುದೇ
ಓ ಪ್ರೀತಿ ನಿನಗೆಂದೇ
ದಿನವೊಂದು ಬೇಕೇ?

ಪ್ರೀತಿಯಲಿ ಮೊದಮೊದಲು
ಜಗವೆಲ್ಲ ಕಾಮನಬಿಲ್ಲು
ಹೃದಯಕ್ಕೊ ಹಗಲಿರುಳು
ಅದೇ ಕನಸಿನ ಅಮಲು ....

ಕಳೆದಂತೆ ದಿನಗಳು
ಕಳೆಯುವವು ಕ್ಷಣಗಳಲಿ
ಉಳಿಯುವುದೇ ಅದೇ ಪ್ರೀತಿ
ಇರೊ ಒಂದೇ ಜನುಮದಲಿ ...

ಉಳಿದು ಬೆಳೆಯುವವೆಷ್ಟೊ
ಅಳಿದು ಮಲಗುವವೆಷ್ಟೊ
ಹುಟ್ಟುವುದೇ ಹೊಸ ಪ್ರೀತಿ
ಹಳೇ ಭಾವನೆಗಳ ಮರೆಸಿ ...

ಗೆದ್ದ ಪ್ರೀತಿಯು ತಾ
ಮೆರೆಯುವುದು ಗತ್ತಿನಲಿ
ಸತ್ತ ಪ್ರೀತಿಯು ಮರು ಹುಟ್ಟುವುದು
ನೆನಪಾಗಿ ಕವಿತೆಯಲಿ ...!!

ರಾಜ್ ..!

ಸುರಿಸು ಬಾ ಒಲವ ಮಳೆಯ
ಸೊರಗಿದೆ ಕೊರಗಿದೆ ನೀನಿಲ್ಲದೇ
ನೀ ಬಿತ್ತಿ ಹೋದ ಪ್ರೀತಿಯ ಬಳ್ಳಿ
ಕಾದಿದೆ ಮರಳಿ ಬಾ ಮಳೆಯೊಂದಿಗೆ ...

ಹೃದಯದ ಅಂಗಳದಲಿ
ಪ್ರೀತಿಯ ಚಿತ್ತಾರವ ಬಿಡಿಸಿ
ನಿನ್ನ ನೆನಪೊಂದ ಕಾವಲಿಗೆ ಬಿಟ್ಟು
ಕಾರಣವ ತಿಳಿಸದೆ ಕಣ್ಮರೆಯಾದೆ ...

ಭಾವನೆಗಳೆಲ್ಲ ಬತ್ತಿ
ನನ್ನ ಹೃದಯವೀಗ ಮರಭೂಮಿ
ಸಿಗದ ಪ್ರೀತಿಯ ಸೆಳೆತವೇ
ಒಲವಿನ ಒರತೆ ಹುಡುಕಲೆಲ್ಲಿ...

ನೆನಪೊಂದಿಗೆ ಸೆಣಸಾಡಿ
ಸೋತಿದೆ ಮನಸು
ನನಸಾಗದ ಕನಸಿಗೆ
ಒಲಿಸಿಕೊಳ್ಳುವ ಬಯಕೆ ...

ಕಾಡಿದ ಕನಸೊಂದಿಗೆ
ಕೂಡಿ ನೆನೆಯುವ ಆಸೆ
ಕಾದಿಹೆನು ಗೆಳತಿ ಮರಳಿ ಬಾ
ಒಲವ ಮಳೆಯೊಂದಿಗೆ ...!!

ರಾಜ್ ..!
ಅವಳ
ಚಂಚಲತೆಗೆ
ಚಂದಿರ
ಕೂಡ
ಚೂರೆ
ಚೂರಾಗಿ
ಕರಗುವನು
ದಿನಂಪ್ರತಿ ...
ಪಾಪದ
ಹುಡುಗನ
ಪಾಡೇನು
ಪಾಪಿ
ಕನಸದು
ಇಷ್ಟಿಷ್ಟೇ
ಕೊಲ್ಲುವುದು ...
ಮನಸಿಗೆ
ಮೈಲಿಗೆಯಾಗಿದೆ
ಕಾರಣ
ಪ್ರೀತಿ
ಸಂಭಂಧದ
ನೆನಪೂ
ಇಂದು
ಮರಣಿಸಿದೆ ..!!
ಕೈಗೂಡದ
ಬಯಕೆಗಳು
ಮನದಾಳದಲ್ಲಿ
ಹುದುಗಿ
ಹೊರ
ಬರುವ
ಭಾವಗಳೆ
ಕವಿತೆಗಳು ...

Monday 2 February 2015


ನೆನಪು ನಡೆದು ಹೋದ
ದಾರಿತುಂಬ ಪ್ರೀತಿ ಕುರುಹು
ಹೀಗೊಂದು ಧನ್ಯವಾದ
ಕನಸ ಕೊಂದು ಹೋಗಿದ್ದಕ್ಕೆ....

ಕಣ್ಣ ಮುಂದೆ ಬರಿಯ ಕತ್ತಲೆ
ಕುರುಡು ಪ್ರೀತಿಯ ಪರಿಯಿದು
ಮೌನವೊಂದೆ ಮನದ ಗೆಳೆಯ
ಪ್ರೀತಿ ಸುಟ್ಟ ಗಾಯಕ್ಕೀಗ ....

ಹೃದಯವೀಗ ಬರಡು ಭೂಮಿ
ಕಳೆಯ ಕೊಳೆಯೆ ಹರಡಿದೆ
ಕೊಳೆಯ ತೊಳೆದು ಪ್ರೀತಿ ಬೆಳೆಸೊ
ಒಲವ ಮಳೆಯು ಸುರಿವುದೇ ....

ನೆನಪು ತೊರೆದು ಹೋದ
ದಾರಿ ತುಂಬ ಹರಡಿಕೊಂಡ
ನರಳಿನಿಂತ ಹೃದಯದ
ತುಂಬು ಹೃದಯದ ಧನ್ಯವಾದ ..!!

(ನನ್ನ ಸ್ನೇಹ ತೋಟದ ಹೂಗಳಿಗೆ ಅಪ೯ಣೆ)

ನನ್ನೆದೆಯ ಹೂದೋಟದಿ
ಅರಳಿದಂಥ ಮಲ್ಲಿಗೆ
ನಮ್ಮ ಸ್ನೇಹ ಮಂದಿರದಿ
ನಗುತಿರು ನೀ ಪ್ರತಿಕ್ಷಣ ...

ದಾರಿ ಮುಳ್ಳು ನನಗಿರಲಿ
ಹೆಜ್ಜೆ ಗುರುತೇ ದಾರಿದೀಪ
ನೋವ ನೆರಳು ಸುಳಿಯದಿರಲಿ
ನಿನ್ನನೆಂದು ಕಾಡದಿರಲಿ ...

ಮಗುವಿನಂತೆ ಮಲಗು ನೀನು
ಕನಸಾಗಿ ಕಾಯುವೆನು
ನಿದಿರೆಯಲ್ಲು ನಗುವಿರಲಿ
ಸ್ನೇಹಕ್ಕಾಗಿ ಸಾಯುವೆನು ...

ನನ್ನೆದೆಯ ಹೂದೋಟದಿ
ಅರಳಿನಿಂತ ಪುಷ್ಪವೇ
ಉಸಿರು ನಮ್ಮ ಮರೆಯುವರೆಗೂ
ಸ್ನೇಹ ಜ್ಯೋತಿ ಆರದಿರಲಿ ...!!

ರಾಜ್ ..!!!
ಆಕಸ್ಮಿಕವಾಗಿ
ಅಂಟಿದ
ನಂಟೊಂದು
ಅಂಕೆಗೆ
ಸಿಗದೇ
ಅಂತರಂಗದಲ್ಲಿ
ಅವಿತು
ಕುಳಿತ
ನೆನಪಿಗೀಗ
ನಾನೊಬ್ಬ
ಅನಾಮಿಕ ...!!!

----------------------------------------------------------
ಧುತ್ತನೇ
ಎದುರಾಗಿ
ಕಾಡುವ
ನೆನಪಿಗೂ
ನೋವಾಗಿದೆ
ಇಂದು
ತನ್ನೊಳಗೆ
ಬಚ್ಚಿಟ್ಟ
ಭಾವನೆಗಳ
ತಿವಿಯುವಿಕೆಯ
ತೀವ್ರತೆಯಿಂದ ....!!

ಕಣ್ಣು ಮಾಡುವ ತಪ್ಪಿಗೆ
ಮನವು ಬೆಂಬಲವಿತ್ತು
ಕನಸು ಕೈಗೂಡದೆ
ನೆನಪಾಗಿ ಕಾಡಿದರೆ...

ನೋವಿನಲೂ ಸಮಪಾಲು
ಮಾಡಿದ ಕಣ್ತಪ್ಪಿಗೆ
ಹಂಬಲಿಸಿ ನೀಡಿದ
ಹುಂಬತನದ ಒಪ್ಪಿಗೆ...

ಕನಸು ಕರಗುವುದು
ನೆನಪು ಮರಗುವುದು
ಕಣ್ಣಿಗು-ಮನಸಿಗೂ
ನೋವಿನ ಬಳುವಳಿ...

ಜನುಮದ ನಂಟಿದೆ
ನಡುವಲ್ಲಿ ನಂಜಿದೆ
ಅಳಿಸಲಾಗದ ಗುರುತು
ಅತ್ತ ಕಣ್ಣೀರಿನ ಕಲೆ...

ಕಣ್ಣು ಮಾಡುವ ತಪ್ಪಿಗೆ
ಮನವು ಬೆಂಬಲವಿತ್ತು
ಕಾಡುವುದು ಕೊನೆವರೆಗೂ
ಈ ಪ್ರೀತಿಯ ಖಾಯಿಲೆ..!!

ರಾಜ್..!!
ಮನದ
ರಥಬೀದಿಯಲ್ಲಿ
ನೆನಪ
ಮೆರವಣಿಗೆ
ಸಾಗಿದೆ
ಸಂತಸದ
ಸುಳಿವಿಲ್ಲ
ಕಾರಣ
ಬಳಿಯಲ್ಲಿ
ಅವಳಿಲ್ಲ 

---------------------------------------------------

ಕಲ್ಪನೆಯಲ್ಲಿ
ಭಾವತೀವ್ರತೆ 
ತುಂಬಿ
ನಿನ್ನ
ನೆನಪಲ್ಲೆ
ಕವಿತೆಯೊಂದು
ಜನಿಸಿದೆ
ಏನೆಂದು
ಹೆಸರಿಡಲಿ
ಕನಸೆಂದು
ಕರೆಯಲೆ.?

ಮೌನದ ರಾತ್ರಿಗೆ
ನೆನಪಿನ ಆಸರೆ
ಒಲವಿನ ಲಾಲಿಗೆ
ಹೃದಯವು ಕಾದಿದೆ ...

ಚಂದ್ರನ ಬೆಳಕಲು
ಕಾಡುವ ಕತ್ತಲು
ಕನಸದೊ ಹೆದರಿದೆ
ಕಣ್ಣಲಿ ಇಳಿಯಲು ...

ನಲ್ಮೆಯ ಒಲವೆ
ನನ್ನಯ ಕನಸೇ
ನೀ ಹಾಡಿಬಿಡು
ಲಾಲಿಯ ಹಾಡೊಂದ...

ಕೇಳುತ ಮಲಗುವೆ
ಲಾಲಿಯ ಹಾಡನು
ನಿನ್ನಯ ನೆನಪಲೇ
ಮರೆಯುವೆ ನನ್ನನೆ ...

ಮೌನದ ರಾತ್ರಿಗೆ
ನೆನಪಿನ ಆಸರೆ
ಒಲವಿನ ಸಾಲಿಗೆ
ಹೃದಯವು ಕಾದಿದೆ ...!

ನನ್ನೊಳಗಿನ ಕವಿಯ
ಅಕಾಲಿಕ ಮರಣವಾಗಿದೆ
ಬರೆದರೂ ಕವಿತೆ
ಭಾವನೆಗಳಿಲ್ಲದೆ ಬರಡು ...

ಹೆಕ್ಕಿ ತಂದು ಅಕ್ಷರಗಳ
ಒಪ್ಪವಾಗಿ ಜೋಡಿಸಿ
ಬರೆದ ಕವಿತೆಗೀಗ
ಹೇಗೆ ತುಂಬಲಿ ಭಾವನೆಗಳ ....

ಭಾವವಿಲ್ಲದ ಕವಿತೆ
ಜೀವವಿಲ್ಲದ ದೇಹದಂತೆ
ಸಿಂಗರಿಸಿದ ಅಕ್ಷರಗಳ
ಕಳೆಬರಹ ನನ್ನೀ ಕವನ ...

ಕಾಣದ ಕಡಲಿಗೆ
ಹಂಬಲಿಸಿ ಈ ಮನ
ಕಾರಣವಾಯಿತೆ ಕವಿಯ ಮರಣಕ್ಕೆ
ತಬ್ಬಲಿಗಳಾದವು ಕವಿಯ ಕವಿತೆಗಳೀಗ ...!!!