Tuesday 28 October 2014


ಕಡಲ ದಡದಲ್ಲಿ
ನಿನಗಾಗಿ ಅಲೆದು
ಅಲೆಗಳೊಲಿದವು
ನೀನೊಲಿಯಲಿಲ್ಲ…

ಇನ್ನೂ ಕಾಯುತಿದೆ
ನನ್ನೊಲವಿನ ಭಾವ
ಸುರಿಯಬಹುದೆ ಎಂದು
ಒಲವಿನ ಮಳೆಗಾಗಿ…

ಅಲೆಗಳು ಬಿಕ್ಕಳಿಸಿವೆ
ನನ್ನಲೆದಾಟವ ಕಂಡು
ಪ್ರತಿ ಬಾರಿ ಮುನ್ನುಗ್ಗಿ ಬರುತಿವೆ
ಈ ಗೆಳೆಯನ ಸಂತೈಸಲು…

ಅಲೆಗಳ ಹೊಡೆತಕ್ಕೆ
ಕಲ್ಲು ಕರಗುವುದು
ನಿನ್ನ ಹೃದಯವ ಕರಗಲು
ಸಪ್ತ ಸಾಗರವೇ ಒಂದಾಗಿ ಬರಬೇಕೆ…!

ನೀ ಬಂದೆ ಬಾಳಲ್ಲಿ
ಬೇಸಿಗೆಯ ಮಳೆಯಂತೆ
ಮೋಡಗಳ ಸುಳಿವಿಲ್ಲ
ಕಾಮನಬಿಲ್ಲೊಂದು ಮೂಡಿದೆ…

ಬಳಿಯಲ್ಲಿ ನೀನಿರಲು
ನನ್ನ ಬಳಸಿರಲು
ತಂಗಾಳಿ ತಂಪಾಗಿ
ಮೈ ಸೋಕಿದ ಅನುಭವ…

ಚಂದ್ರಂಗೂ ಅಸೂಯೆ
ನೀ ನನ್ನ ವರಿಸಿರಲು
ಚುಕ್ಕೆಗಳು ಚದುರಿವೆ
ನಿನ್ನಂದವ ನೋಡಲು…

ಭೂತಾಯಿ ಮಡಿಲಲ್ಲಿ
ಪುಟ್ಟದೊಂದು ಗುಡಿಸಲು
ನನ್ನವಳೇ ನಿನಗೆಂದೆ
ಈ ಬಾಳು ಮೀಸಲು…!!

ರಾಜ್…!!
ಕಣ್ಣ ಬಿಟ್ಟು ಜಾರಿದ
ನೀನೆಂಬ ಕನಸು
ಅಡಗಿ ಕುಳಿತಿದೆ
ಮನದಲ್ಲಿ ನೆನಪಾಗಿ…

ಕನಸಾಗಿ ಮಧುರವಿತ್ತು
ಮಧುವಿರದ ನೆನಪೀಗ
ಕನಸ ಕಚಗುಳಿಗಿಂತ
ವಿರಹದುರಿ ಈ ನೆನಪು…

ಕೈ ಮುಗಿದು ಬೇಡುವೆನು
ಕನಸಲ್ಲಿ ನೆನಪಾಗಬೇಡ
ನೆನಪಲ್ಲೇ ಕನಸು ಸಾಕು
ಮತ್ತೆ ಮತ್ತೆ ಕಾಡಬೇಡ…

ಕಣ್ಣ ಬಿಟ್ಟು ಜಾರಿದ ಕನಸು ನೀನು
ನೆನಪಾಗಿ ಕಾಡುವ ಹಂಬಲವೇಕೆ
ನಿನ್ನ ಕನಸಿನಾಸರೆಯಲ್ಲಿ ಬದುಕುವ ಆಸೆಯಿಲ್ನ
ಮರೆಗುಳಿ ಮನಸಿಗೆ ನೆನಪಿನ ಹಂಗೇತಕೆ…!!
ಮಡುಗಟ್ಟಿದ ಮನದ ದುಗುಡ
ಕರಗಿದೆ ಕಣ್ಣೀರ ಮಳೆಯಾಗಿ
ಸಾಂತ್ವನದ ಸ್ವಾತಂತ್ರ್ಯ
ಮುದುಡಿದ ಮನಸಿಗೆ…

ಕಾಣುವ ಕನಸುಗಳೆಲ್ಲ
ಕಾಡುವ ನೆನಪುಗಳಲ್ಲ
ಗುರಿತಪ್ಪಿದ ಕನಸುಗಳೇ
ಸತ್ತು ನೆನಪಾಗಿ ಕಾಡುವವು…

ಪ್ರೀತಿ ಬಳಿ ಬಂದಾಗ
ಕಾಲಡಿಯ ಕಸದಂತೆ ಕಂಡು
ಬಯಸಿ ಬೇಕೇಂದರು ಈಗ
ಅದು ಪರರ ಸೊತ್ತು…

ಮತ್ತೆ ಚಿಗುರುವುದೇ ಪ್ರೀತಿ
ಸತ್ತ ಭಾವನೆಗಳಲಿ
ಮರೆತ ನೆನಪದು ಕೂಡ
ಸುಪ್ತ ಮನಸಿನಲಿ…

ಮನದ ದುಗುಡ ಕರಗಿ
ಹಗುರಾಗಿದೆ ಮನ
ಹಳೇ ಕೊಳೆಯು ತೊಳೆದು
ಹೊಸ ನೀರು ಹರಿದಂತೆ…!!
ಭಾವನೆಗಳ
ಮಡಿಲಲ್ಲಿ
ಜನಿಸಿದ
ಕವಿತೆ
ಭಾವನೆಗಳನ್ನೆ
ಅಳಿಸಿ
ಕಾಡಿಸಿ
ಕೊಲ್ಲುತ್ತದೆ
ತನ್ನ
ಕವಿತೆಯಲ್ಲಿ…!!
ಅವನದೆಲ್ಲವನ್ನು
ದೋಚಿದ್ದ
ಅವಳು
ಮತ್ತೇ
ಲೆಕ್ಕ
ಹಾಕುತ್ತಿದ್ದಳು
ಇನ್ಯಾರನ್ನು
ದಿವಾಳಿ
ಮಾಡುವುದು
ದೀಪಾವಳಿಗೆ
ಎಂದು...!!!
ನಿನ್ನ
ಕಂಗಳಲ್ಲಿ
ಮಿನುಗುವ

ಕೋಲ್ಮಿಂಚ
ಬೆಳಕು
ನನಗೆ
ನಿತ್ಯ
ದೀಪಾವಳಿ..!!
.....................................................................................................................
ಮತ್ತೆ
ಹತ್ತಿರವಾಗುತ್ತಿದೆ
ಕನಸು
ಕಣ್ತಪ್ಪಿ
ಹೋಗುವ
ಭಯವಿಲ್ಲ
ಕಾರಣ
ಅದೀಗ
ನನಸಾಗದ
ಹಗಲು-ಗನಸು..!!
...................................................................................................................
ಸತ್ತ
ಭಾವನೆಗಳಿಗೆ
ಮತ್ತೇ
ಜೀವ
ಬಂದಿದೆ
ನೀನಿಲ್ಲೆ
ಸುತ್ತ-ಮುತ್ತಲಿರುವ
ಸುದ್ದಿ
ತಿಳಿದು..!!

Tuesday 7 October 2014


ಒಲವೆಂಬ ಹಣತೆ
ನೀನಾಗಲಿಲ್ಲ
ಬದುಕಲ್ಲಿ ಕತ್ತಲೆಯು
ದೂರಾಗಲಿಲ್ಲ…

ಕೋಲ್ಮಿಂಚು ಬೆಳಕಂತೆ
ಮಿಂಚಿ ಮರೆಯಾದೆ
ಜಗಬೆಳಗೊ ಸೂಯ೯ನಿಗೂ
ವಿರಹದ ಕಾಟ…

ಮನೆ ಬೆಳಗೊ ಬದಲಾಗಿ
ಮನವನ್ನೇ ನೀ ದಹಿಸಿ
ನನ್ನೆದೆಯ ಬಾಂದಳದಿ
ಶಾಶ್ವತದ ಗ್ರಹಣ…

ಮೇಣದ ಬತ್ತಿಯಂತೆ
ಒಳಗೊಳಗೇ ನಾ ಕರಗಿ
ಜೊತೆಯಾದ ನೆರಳಿಗೆ
ಬೆಳಕಾಗಿ ಬದುಕಿರುವೆ…

ಒಲವೆಂಬ ಹಣತೆ
ನೀನಾಗಲಿಲ್ಲ
ನೀನಿರದೆ ಬದುಕಲ್ಲಿ
ರವಿ ಮೂಡಲಿಲ್ಲ…!!

ನೋಡು ಚಂದಿರನ
ಅಪಹರಣವಂತೆ
ಅಪರಾಧಿ ನಾನಲ್ಲ
ಅಪವಾದವೆನಗೇಕೆ…

ಯಾವ ಪ್ರೇಮಿಯ
ಪ್ರಿಯತಮೆಯ ಕಾಡಿದನೊ
ಯಾರ ಚಲುವೆಯ ಚಿತ್ತ
ಚಂಚಲಗೊಳಿಸಿದನೊ…

ನನ್ನ ಚುಕ್ಕಿಗು ಅವ
ಬಹುವಾಗಿ ಕಾಡಿದನು
ಕಾಡಿ -ಬೇಡಿ ನಾ
ನನ್ನವಳ ಬಳಿ ಸೆಳೆದೆ…

ನೋಡು ಚಂದಿರನ
ಅಪಹರಣವಂತೆ
ಯಾರವರು ಕದ್ದವರು
ಚೋರನ ಚೋರಿಯಾಗಿದೆ…

ಆಗಸದಿ ಚಂದಿರನಿಲ್ಲ
ಯಾರು ಕದ್ದರೊ ಕಾಣೆ
ಅಪರಾಧಿ ನಾನಲ್ಲ
ಅಪವಾದವೆನಗೇಕೆ…?

ರಾಜ್…!!