Sunday 26 January 2014

ಕಾಲನ ಕರೆ ಅದು
ಕರೆಯದೇ ಬರುವುದು
ಕಾಯಕವೆ ಕೈಲಾಸ
ತಪ್ಪದೆ ಮಾಡುವುದು…

ವಿಧಿಯಾಟದ ಮುಂದೆ
ಎಲ್ಲವೂ ತೃಣ ಸಮಾನ
ಪ್ರತಿಯೊಂದು ಜೀವಿಗೂ
ತನ್ನದೇ ಸ್ಥಾನಮಾನ…

ಉಸಿರಿರುವ ತನಕವು
ಹಾರಾಟ -ಹೊರಾಟ -ಹೊಡೆದಾಟ
ಹೆಸರಿನ ಹಸಿವದು ಮುಗಿದ ದಿನ
ದೇಹ ಪಂಚಭೂತಗಳಲ್ಲಿ ಲೀನ…

ಕಾಲನ ಕರೆ ಕಾಯದೆ ಬರುವುದು
ಮಾಡದೆ ಕಾಲಹರಣ
ಋಣತೀರಿದ ಮರುಕ್ಷಣವೇ
ಮುಗಿಲ ಕಡೆ ಪಯಣ…!!

ರಾಜ್…!!
ಗೆಳತಿ ಇದು ರಾಮರಾಜ್ಯವಲ್ಲ
ಹೆಣ್ಣನ್ನು ಇಲ್ಲಿ ಪೂಜಿಸುವುದಿಲ್ಲ
ನಡುರಾತ್ರಿ ನಡೆಯಲು ಸ್ವಾತಂತ್ರ್ಯವಿಲ್ಲ
ಮಾನಕ್ಕು-ಪ್ರಾಣಕ್ಕೂ ಮಾರಕ ರೋಗ...

ಗೆಳತಿ ಇದು ದ್ವಾಪರಯುಗವಲ್ಲ
ಮಾನವ ಕಾಪಾಡಲು ಶ್ರೀಕೃಷ್ಣ ಬರುವುದಿಲ್ಲ
ಕೌರವರ ಸಂತತಿಯು ಹೆಚ್ಚಿದೆ ಈಗಂತೂ
ನಿನ್ನಾ ರಕ್ಷಣೆಗೆ ನೀನಾಗಬೇಕು ಮಾರಿ...

ಕಲಿಯುಗದ ಕರಾಳ ದಿನಗಳು
ಕ್ರೌರ್ಯ ತುಂಬಿದ ಪ್ರತಿ ಕ್ಷಣಗಳು
ಸಹೋದರತೆಯ ಮುಖವಾಡದಿ ಕಾಮದ ಕರಿನೆರಳು
ಯಾರ ನಂಬುವುದೋ.? ಮಾನಾ-ಭಿಮಾನ..

ಕಲಿತುಕೊ ಗೆಳತಿ ಸ್ವರಕ್ಷಣೆ..ಕಲಿಯುಗವಿದು
ಬಾರರು ಯಾರಿಲ್ಲಿ ಬರಿ ತಮಾಷೆ ನೋಡುವರು
ಬದಲಾಗಬೇಕು ನೀ ಅಬಲೆಯಲ್ಲ ಸಬಲೆ
ಸ್ತ್ರೀ ಕುಲಕ್ಕೆ ನೀನಾಗು ಸ್ಪೂರ್ತಿಯ ಸೆಲೆ...!!

ರಾಜ್..!

Tuesday 14 January 2014

ಆಸೆಯ ಭಾವ ಆಗಸಕೇರಿದೆ
ಮೋಹವು ಕೂಡಾ ಆಸರೆ ನೀಡಿದೆ
ಚಂಚಲ ಮನಸು ಹೊಸ-ಹೊಸ ಕನಸು
ಬಯಸಿದ್ದೆಲ್ಲವು ಬದುಕಲಿ ಸಿಗದು...

ದೂರದ ಬೆಟ್ಟವು ಕಣ್ಣಿಗೆ ನುಣ್ಣಗೆ
ಸುಳಿದರೆ ಹತ್ತಿರ ಸಿಗುವುದು ಉತ್ತರ
ಕೈಗೆಟುಕದ ದ್ರಾಕ್ಷಿ ಹುಳಿಯಂದಾದರೆ
ಕಷ್ಟವ ಪಡದಿರೆ ಹೊಟ್ಟೆಯು ತುಂಬದು...

ದುಡ್ಡಿನ ಮದಕೆ ಸತ್ಯವು ದೋಷಿ
ದುಡ್ಡೊಂದಿದ್ದರೆ ಮಿಥ್ಯಕು ದಾಸಿ
ಲೋಹದ ಮೋಹಕೆ ತೀರದ ದಾಹಕೆ
ಜಗವು ಕೂಡಾ ವಿಲಾಸಿ...

ಪ್ರೀತಿಯ ಸೆಳೆತ ಸೇರುವ ತುಡಿತ
ಸಭ್ಯತೆ ಹೆಸರಲಿ ಹೆಚ್ಚಿದ ಹಿಡಿತ
ಸಂಭಂಧಗಳ ನಡುವಣ ಉಸಿರಿನ ಕೊರತೆ
ಬದುಕಿವೆ ಇನ್ನು ಕೃತಕ ಉಸಿರಾಟದ ಜೊತೆ...

ಲೋಭದ ಮನಸಿಗೆ ಅಂಕೆಯು ಇಲ್ಲದೆ
ಕಾಮವು ತನ್ನ ಕಾಣಿಕೆ ನೀಡಿದೆ
ಮೋಹದ ಜಾಲದಿ ಆತ್ಮವು ನರಳಿದೆ
ಆಸೆಯ ಭಾವ ಆಗಸಕೇರಿದೆ...!!

ರಾಜ್..!!

Friday 10 January 2014

ಜೀವನದ ನಾಟಕದಿ
ತನ್ನ ಪಾತ್ರವ ಮುಗಿಸಿ
ಹೊರಟು ನಿಂತಳಾ ಹೆತ್ತಬ್ಬೆ
ಮಕ್ಕಳನು ಕಡೆಗಣಿಸಿ …

ಅಪ್ಪನೆನ್ನುವ ಬೆಪ್ಪ
ತೊರೆದಿದ್ದ ಸಂಸಾರ
ತಾಯಿ -ಮಕ್ಕಳ ತೊರೆದು
ಹೊಗಿದ್ದ ದೇಶಾಂತರ…

ಕಿರುಚಾಡಿ ಕೂಗಾಡಿ
ಅಳುತಿವೆ ಕರುಳಕುಡಿ
ಹಳಿತಪ್ಪಿದ ಬದುಕಿಗೆ
ದಿಕ್ಕಾರು ಕೊನೆವರೆಗೆ…!!

ರಾಜ್…!!

“ಅಮ್ಮನ ಮಡಿಲು -ಸ್ವಗ೯ಕ್ಕು ಮಿಗಿಲು ‘’

ಜೋಗುಳವ ಹಾಡಮ್ಮ
ಜೋಗುಳವ ಹಾಡೊಮ್ಮೆ
ಮನಸಿನ ದುಗುಡವ
ಮರೆತು ಮಗುವಾಗುವೆ ಮತ್ತೊಮ್ಮೆ… 

ಮಡಿಯುವ ಮೊದಲೊಮ್ಮೆ
ಮಡಿಲಲ್ಲಿ ಮಲಗುವೆನು
ಜೋಗುಳವ ಕೇಳುತ್ತ
ನೋವೆಲ್ಲ ಮರೆಯುವೆನು…

ಕಾಲಚಕ್ರದ ಜೊತೆ
ಕಾದಾಟ ಸಾಕಾಯ್ತ
ಸಮಯದ ಜೊತೆ ಓಡಿ
ಮನಶಾಂತಿ ಮರೆಯಾಯ್ತು…

ಜೋಗುಳ ಹಾಡಮ್ಮ
ಜೋಗುಳವ ಹಾಡೊಮ್ಮೆ
ಜೋಗುಳವ ಕೇಳುತ್ತ
ಮರೆಯವೆ ಜಗವನ್ನೆ…!!!

ರಾಜ್…!!
 —
ಹರೆಯದರಲ್ಲಿ
ಹೆತ್ತವರು ಗದರಿದರೆ
ತಿರುಗಿ ಒದರುತ್ತಿದ್ದ …

ಪ್ರಾಯದಲಿ
ಹೆಂಡತಿಗೆ ಹೆದರಿ
ಬೆದರುತ್ತಿದ್ದ…

ಮುಪ್ಪಿನಲಿ
ಮಕ್ಕಳಿಗೆ ಹೆದರಿ
ಮುದುರಿಕೊಂಡ…

ಇಂದಿನ ಉತ್ತರ ಕುಮಾರ…!!!

ರಾಜ್…!!
ನನ್ನೆದೆಯ ಗೂಡಲ್ಲಿ
ನಿನ್ನ ನೆನಪಿಗಾಗಿ
ಕೂಡಿಟ್ಟ ನೆನಪುಗಳು…

ಒಂದೊಂದಾಗಿ ಹೊರ ಬರುತಿವೆ
ಮೊಟ್ಟೆಯಿಂದ ಹೊರಬರುವ 
ಪುಟ್ಟ ಮರಿಗಳಂತೆ…

ರೆಕ್ಕೆ ಬಲಿತು ಹಕ್ಕಿ ಹಾರೊ ಹಾಗೆ
ನೆನಪುಗಳು ಬೆಳೆದು ಕೊಲ್ಲೊ ಮುನ್ನ
ಒಡೆದು ಬಿಡಲೆ ನೆನಪಿನ ಮೊಟ್ಟೆ…!!

ರಾಜ್…!!
ಜಾರುತಿದೆ ಕನಸು
ಏಕೊ ಕಣ್ಣ ಬಿಟ್ಟು
ಜಾರದಿರು ಗೆಳತಿ
ನೀ ಮನಸ ಬಿಟ್ಟು…

ಕನಸಿಗೆಕೊ ನನ್ನ ಮೇಲೆ
ಮುನಿಸು ಬಂದಿದೆ
ಮನಸು ಮಾತ್ರ
ನಿನ್ನೊಳಗೆ ಬೆರೆತುಬಿಟ್ಟಿದೆ…

ಯಾರ ಸಂತೈಸಲಿ ನಾನಿಗ
ಮುನಿದ ಕನಸನ್ನೊ
ನೆನೆವ ಮನಸನ್ನೊ
ಮುಗಿಯದ ಗೊಂದಲ…!!

ರಾಜ್…!!
ನೀ ಕೊಟ್ಟ ನವಿಲುಗರಿ
ಮರಿಯೊಂದ ಹಾಕಿದೆ
ನೆನಪಿನ ಪುಟಗಳಲಿ
ಬಹುವಾಗಿ ಕಾಡಿದೆ…

ನೀನಂದು ದೂರಾದೆ
ಹೇಳದೆ -ಕೇಳದೆ
ನಿನ್ನಯ ನೆನಪಲ್ಲೇ
ನಿನಗಾಗಿ ಕಾದಿದೆ…

ಇನಿಯಾ ನೋಡು ಬಾ ಒಮ್ಮೆ
ನೆನಪಿನ ಪುಟ ತೆಗೆದು
ಮನಸಿನ ಕದ ತೆಗೆದು
ನೀ ಕೊಟ್ಟ ನವಿಲುಗರಿ…!!

ರಾಜ್…!!
ಮಕ್ಕಳಿಲ್ಲದ ತಾಯಿಗೆ
ಗಭ೯ದ ಬೆಲೆ ಗೊತ್ತು
ಬಸಿರಾಗದ ನೋವು
ಅರಿಯುವರಾರು…

ಹತ್ತು ಮಕ್ಕಳ ಹಡೆದವ್ವ 
ಗಂಡು ಕೂಸಿಲ್ಲದೆ
ಲೋಕದ ಕೊಂಕಿಗೆ
ಮೌನದಿ ಕೊರಗಿಹಳು…

ಹರೆಯದ ಹುಡುಗಾಟದಿ
ಬಸಿರಾದ ಹುಡುಗಿಗೆ
ಕರುಳ ಬಳ್ಳಿಯ ಕೂಸು
ಬೆಟ್ಟದ ಹೊರೆಯಂತೆ…

ಬೇಡದ ಬಸಿರಿಗೆ
ಗಂಡು ಮಗು ಹುಟ್ಟಿದೊಡೆ
ವಂಶೋಧ್ದಾರಕನೆನ್ನುವ
ಖುಷಿಯುಂಟೆ…!!

ರಾಜ್…!!
ಕಾದಿಹಳು ರಾಧೆ
ಅಲ್ಲಿ ನಿನಗಾಗಿ
ಮೋಹನ ಮುರುಳಿಯೆ
ನಿನ್ನಯ ಪ್ರೀತಿಗಾಗಿ..

ಯುಗ-ಯುಗಗಳೆ ಕಳೆದರು
ಅವಳ ಪ್ರೀತಿ ಬತ್ತಿಲ್ಲ
ರಾಧೆ ಮರೆತ ನಿನ್ನಿಂದ
ಪ್ರೀತಿಯಿನ್ನು ಸಿಕ್ಕಿಲ್ಲ..

ಭಾಮೆ-ರುಕ್ಮಿಣಿಯರೊಡನೆ
ನಿತ್ಯ ನಿನ್ನ ರಂಗೀನಾಟ
ಪ್ರೀತಿ ಕಾದ ರಾಧೆಗಲ್ಲಿ
ವಿರಹದಿ ನರಳಾಟ..

ಗೋಕುಲನಂದನ ಸ್ತ್ರೀಲೋಲ
ಕೇಳು ರಾಧೆಯ ಗೋಳ
ಕಾದಿಹ ರಾಧೆಯ ನೋಯಿಸದಿರು
ನಿರ್ಮಲ ಪ್ರೀತಿಯ ಕಾಯಿಸದಿರು..

ಒಪ್ಪಿಕೋ ಕೃಷ್ಣ
ರಾಧೆಯ ಪ್ರೀತಿ
ನೀಡಬಾರದೆ ನೀ
ಕಾಯುವಿಕೆಗೆ ಮುಕ್ತಿ,..?

ರಾಜ್...!!!
 —
ಸಾವಿಲ್ಲದ ಮನೆಯ
ಸಾಸಿವೆಯ ತರಲು
ಸಂತ ತಾ ಹೇಳಿದ
ಕಂದನ ಬದುಕಿಸಲು..

ಸಾಸಿವೆಯ ಹುಡುಕುತಿಹೆ
ಸಾವಿಲ್ಲದ ಮನೆಯಿಲ್ಲ
ಸಾಸಿವೆಯು ಸಿಗುತಿಲ್ಲ
ಎಲ್ಲೆಲ್ಲೂ ಸೂತಕದ ಛಾಯೆ..

ಹೇಗೆ ಬದುಕಿಸಲಿ
ನಾ ಮುದ್ದು ಕಂದನ
ಬೇರೊಂದು ದಾರಿಯ
ಹೇಳೆಂದಳು ಸಂತನ..

ಸಂತೈಸುತ ಸಂತ
ಮಾತೋಂದ ಹೇಳಿದ
ಹುಟ್ಟು-ಸಾವುಗಳೆರಡು
ನೀರ ಮೇಲಣ ಗುಳ್ಳೆ..

ಹುಟ್ಟಿದ ಪ್ರತಿ ಜೀವಿ
ಅದು ನಶಿಸಲೆಬೇಕು
ಸೃಷ್ಠಿಯ ಕ್ರಿಯೆಯಿದು
ನಿತ್ಯ-ನಿರಂತರವದು..!!

ರಾಜ್..!!

(ಗೌತಮ ಬುದ್ದನ ಚರಿತ್ರೆಯಲ್ಲಿ ಬರುವ
ಒಂದು ಸಂಭಾಷಣೆಯಿಂದ ಪ್ರೇರಿತ)
ಯಾವ ಜನ್ಮದ ಮೈತ್ರಿಯೊ
ನಮ್ಮ ಪ್ರೀತಿಯ ಬಂಧನ
ಈ ಜನುಮದ ಋಣ ತೀರಿತು
ಕೊನೆಯಾಯಿತು ಸಂಭಂದ…

ಕೊನೆವರೆಗೂ ಜೊತೆಗಿರುವ 
ಕನಸಿನಲಿ ನಾನಿದ್ದೆ
ಕನಸಿನ ಕತ್ಹಿಸುಕಿ
ಬಹುದೂರ ನೀ ಹೊದೆ…

ನಿನ್ನ ನಟನೆಯ ಪ್ರೀತಿ
ನಿಜವೆಂದು ನಾ ತಿಳಿದೆ
ಪ್ರೀತಿ ಚಂಚಲವೆಂದು
ನೀನಿಂದು ತೋರಿಸಿದೆ…

ಕಾಯುವೆ ನಾ ನಿನಗಾಗಿ
ಜನುಮ - ಜನುಮದಲೂ
ಹೊಸ ಹೆಸರಿನೊಂದಿಗೆ
ಹೊಸ ಉಸಿರಿನೊಂದಿಗೆ…!!

ರಾಜ್…!!
ಚೂರಾದ ಕನ್ನಡಿಯಲ್ಲಿ 
ನೂರಾರು ಬಿಂಬಗಳು 
ಪ್ರತಿಯೊಂದು ಬಿಂಬದಲೂ 
ನಿನ್ನದೇ ಪ್ರತಿಬಿಂಬಗಳು… 

ಒಡೆದ ನನ್ನ ಹೃದಯದಲ್ಲು 
ಬರಿ ನಿನ್ನದೇ ನೆನಪುಗಳು
ಪ್ರತಿಯೊಂದು ನೆನಪಿನಲ್ಲೂ
ನಿನ್ನ ಪ್ರೀತಿಯ ಕುರುಹುಗಳು…

ಇರುಳಾದರೆ ಕಾಡುವ ಕನಸುಗಳು
ವಿರಹದಿ ನರಳಿವೆ ನರನಾಡಿಗಳು
ಅಣುಕಿಸಿ ನಗುತಿವೆ ನೆನಪುಗಳು
ನನ್ನನೆ ನೋಡಿ ಹಗಲಿರುಳು…

ಒಡೆದ ಕನ್ನಡಿ ಅದು
ಅಪಶಕುನವೆನ್ನುವುದಾದರೆ
ಒಲವ ಕಡೆಗಣಿಸಿ
ಹೃದಯ ಒಡೆದವಳು…??

ರಾಜ್…!!